ತೆಂಗಿನ ನಾರಿನ ಕೈಗಾರಿಕೆ

ತೆಂಗಿನಕಾಯಿಯ ಹೊರಭಾಗದಲ್ಲಿರುವ ನಾರು (ಕಾಯರ್) ಬಹಳ ಉಪಯುಕ್ತವೆನಿಸಿದೆ. ಇದರಿಂದ ಹಲವಾರು ಬಗೆಯ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸಬಹುದು. ವಾಣಿಜ್ಯ ದೃಷ್ಟಿಯಿಂದ ತೆಂಗಿನ ನಾರು ಗಟ್ಟಿ ನಾರುಗಳಲ್ಲಿ (ಹಾರ್ಡ್ ಫೈಬರ್ಸ್) ಒಂದು ಎಂದು ಪರಿಗಣಿತವಾಗಿದೆ. ಈ ನಾರಿನ ಮೇಲೆ ಆಧಾರಿತವಾದ ಕೈಗಾರಿಕೆ (ಕಾಯರ್ ಇಂಡಸ್ಟ್ರಿ) ಭಾರತದ ಪ್ರಮುಖ ಕೈಗಾರಿಕೆಗಳಲ್ಲಿ ಒಂದು.

ಈ ಕೈಗಾರಿಕೆ ಬಹಳ ಹಿಂದಿನ ಕಾಲದಿಂದಲೂ ಭಾರತದಲ್ಲಿ ಬೆಳೆದು ಬಂದಿರುವಂತಹದು. ಇಂಗ್ಲಿಷಿನ ಪದ `ಕಾಯರ್ ಎಂಬುದು ಮಲಯಾಳಮಿನ `ಕಾಯಾರ್ ಎಂಬುದರಿಂದ ಬಂದದು ಎಂದು ನಂಬಲಾಗಿದೆ; ಹೀಗೆಂದರೆ ಹಗ್ಗ ಎಂದು ಆರ್ಥ. ಇದರಿಂದಾಗಿ ಕೇರಳದ ಕರಾವಳಿಯ ಮೂಲಕ ಈ ವಸ್ತು ಪರದೇಶಗಳಿಗೆ ನಿರ್ಯಾತವಾಗುತ್ತಿತ್ತೆಂದು ಗೊತ್ತಾಗುತ್ತದೆ. ಹನ್ನೊಂದನೆಯ ಶತಮಾನದ ಅರಬ್ಬಿ ಬರೆಹಗಾರರು ತೆಂಗಿನ ನಾರಿನಿಂದ ತಯಾರಾದ ಹಡಗುಗಳಲ್ಲಿ ಉಪಯೋಗಿಸುವ ಹಗ್ಗ ಮುಂತಾದವುಗಳ ಬಗ್ಗೆ ಬರೆದಿದ್ದಾರೆ. ಪ್ರಸಿದ್ಧ ಪ್ರವಾಸಿ ಮಾರ್ಕೊಪೋಲೊ ಸಹ ಪರ್ಷಿಯನ್ ಕೊಲ್ಲಿಯಲ್ಲಿ ಹಡಗುಗಳ ನಿರ್ಮಾಣಕ್ಕೆ ತೆಂಗಿನ ನಾರಿನ ಹಗ್ಗವನ್ನು ಬಳಸುತ್ತಿದ್ದುದರ ಬಗ್ಗೆ ಉಲ್ಲೇಖಿಸಿದ್ದಾನೆ. ಆದರೆ ತೆಂಗಿನ ನಾರಿನ ಮೊದಲ ಕೈಗಾರಿಕೆ ಆರಂಭವಾದ್ದು ಲಂಡನಿನಲ್ಲಿ. ಸುಮಾರು 125 ವರ್ಷಗಳ ಹಿಂದೆ ಅಲ್ಲಿನ ಜಮಖಾನೆಗಳ ಕಾರ್ಖಾನೆಯೊಂದು ತೆಂಗಿನನಾರಿನಿಂದ ನೆಲಹಾಸುಗಳ ತಯಾರಿಕೆಯನ್ನು ಕೈಗೊಂಡಿತು. ಭಾರತದಲ್ಲಿ ಬೃಹತ್ ಪ್ರಮಾಣದ ಕೈಗಾರಿಕೆ ಮೊದಲುಗೊಂಡಿದ್ದು 1859ರಲ್ಲಿ. ಐರಿಷ್ ಮೂಲದ ಅಮೆರಿಕನ್ ಒಬ್ಬ ಮಲಬಾರ್ ಕರಾವಳಿಯಲ್ಲಿ ತೆಂಗಿನ ನಾರಿನ ನೇಯ್ಗೆ ಉದ್ಯಮವನ್ನು ಆರಂಭಿಸಿದ. ಅಲ್ಲಿಂದೀಚೆಗೆ ಈ ಕೈಗಾರಿಕೆ ದೊಡ್ಡದಾಗಿ ಬೆಳೆದದು ನಾರಿನ ಉತ್ಪನ್ನಗಳ ಗುಣದಲ್ಲಿ ಮತ್ತು ವೈವಿದ್ಯದಲ್ಲಿ ಗಣನೀಯ ಅಭಿವೃದ್ದಿಯನ್ನು ಸಾಧಿಸಿದೆ.

ತೆಂಗಿನ ನಾರಿನ ಕೈಗಾರಿಕೆ ಪ್ರಮುಖವಾಗಿರುವುದು ಕೇರಳದಲ್ಲಿ. ಇತ್ತೀಚಿನ ವರ್ಷಗಳಲ್ಲಿ ತೆಂಗನ್ನು ಬೆಳೆಯುವ ಉಳಿದ ರಾಜ್ಯಗಳೂ ಇದನ್ನು ಪ್ರಾರಂಭಿಸಿವೆ. ಭಾರತದಲ್ಲಿ ತೆಂಗಿನ ನಾರಿನ ವಿವಧ ಬಗೆಯ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಘಟಕಗಳ ಸಂಖ್ಯೆ ಸುಮಾರು 1,37,435. ಇದರಲ್ಲಿ 1,35,020 ಘಟಕಗಳು ಕೇರಳದಲ್ಲೇ ಇವೆ. ತಮಿಳುನಾಡಿನಲ್ಲಿ 1641, ಗೋವಾದಲ್ಲಿ 688, ಕರ್ನಾಟಕದಲ್ಲಿ 35 ಘಟಕಗಳುಂಟು. ಈ ಘಟಕಗಳು ನಾರನ್ನು ತೆಗೆಯುವುದು, ಹಗ್ಗವನ್ನು ಹೊಸೆಯುವುದು, ನೂಲುವುದು, ರಬ್ಬರೀಕರಣ ಮುಂತಾದ ಕಾರ್ಯಗಳನ್ನು ನಡೆಸುವವು. ಈ ಕೈಗಾರಿಕೆಯಲ್ಲಿ ಕೆಲಸ ಮಾಡುವವರ ಸಂಖ್ಯೆ 5,00,000 ಎಂದು ಅಂದಾಜು ಮಾಡಲಾಗಿದೆ.

ಪ್ರಪಂಚದ ಮಾರುಕಟ್ಟೆಯಲ್ಲಿ ಸುಮಾರು 1,54,000 ಮೆಟ್ರಿಕ್ ಟನ್ನುಗಳಷ್ಟು ತೆಂಗಿನ ನಾರಿನ - ಉತ್ಪನ್ನಗಳ ವಹಿವಾಟು ನಡೆಯುತ್ತದೆ. ಇದರಲ್ಲಿ ಕಚ್ಚಾನಾರು 94,960 ಮೆಟ್ರಿಕ್ ಟನ್ನಾದರೆ ಉತ್ಪನ್ನಗಳ ತೂಕ 59,040 ಮೆಟ್ರಿಕ್ ಟನ್ನು. ಪ್ರಪಂಚದಲ್ಲಿ ತಯಾರಾಗುವ ತೆಂಗಿನ ನಾರಿನ ಒಟ್ಟು ಉತ್ಪಾದನೆಯಲ್ಲಿ ಭಾರತದ ಪಾಲು ಸುಮಾರು 56% ಉಳಿದದ್ದರಲ್ಲಿ ಬಹುಪಾಲು ಶ್ರೀಲಂಕಾದ್ದು. ಭಾರತದ ಅಂಕಿಅಂಶಗಳನ್ನೇ ತೆಗೆದುಕೊಂಡರೆ ಒಟ್ಟು ಉತ್ಪಾದನೆಯಲ್ಲಿ 1,61,000 ಮೆಟ್ರಿಕ್ ಟನ್ನುಗಳು. ಇದರಲ್ಲಿ 95% ಕೇರಳವೊಂದರಲ್ಲೇ ಉತ್ಪತ್ತಿಯಾಗುತ್ತದೆ.

ಭಾರತದಿಂದ ಸುಮಾರು 110 ದೇಶಗಳಿಗೆ ತೆಂಗಿನನಾರು ಹಾಗೂ ಜಮಖಾನೆ, ಚಾಪೆ, ಹಗ್ಗ, ರಬ್ಬರೀಕರಿಸಿದ ನಾರಿನ ಉತ್ಪನ್ನಗಳು, ನೂಲು ಮುಂತಾದುವನ್ನು ರಫ್ತು ಮಾಡಲಾಗುತ್ತದೆ. 1972-73ರ ಸಾಲಿನಲ್ಲಿ 15 ಕೋಟಿ ರೂಪಾಯಿ ಮೌಲ್ಯದ 49,489 ಮೆಟ್ರಿಕ್ ಟನ್ ತೆಂಗಿನ ನಾರಿನ ಉತ್ಪನ್ನಗಳನ್ನು ರಫ್ತು ಮಾಡಲಾಯಿತು.

ಇಷ್ಟು ಉಪಯುಕ್ತವಾಗಿರುವ ತೆಂಗಿನ ನಾರಿನ ಕೈಗಾರಿಕೆಯನ್ನು ಉತ್ತಮಗೊಳಿಸುವ ಸಲುವಾಗಿ ಕೇರಳದ ಕೊಚ್ಚಿಯಲ್ಲಿ 1953ರಲ್ಲಿ ಕಾಯರ್ ಬೋರ್ಡ್‍ನ್ನು ಸ್ಥಾಪಿಸಲಾಯಿತು. ತೆಂಗಿನ ನಾರಿನ ಕೈಗಾರಿಕೆಯ ಅಭಿವೃದ್ದಿ, ನಾರಿನ ಉತ್ಪನ್ನಗಳನ್ನು ನಿರ್ಯಾತ ಮಾಡುವ ಕಾರ್ಯದಲ್ಲಿ ಉತ್ಪಾದಕರಿಗೆ ಸಹಾಯ ನೀಡುವುದು, ನಾರನ್ನು ಉತ್ತಮಗೊಳಿಸುವ ಸಲುವಾಗಿ ಸಂಶೋಧನೆ ನಡೆಸುವುದು- ಈ ಸಂಸ್ಥೆಯ ಮುಖ್ಯ ಕೆಲಸಗಳು. ಕೊನೆಯಲ್ಲಿ ಹೇಳಿದ ಕೆಲಸಕ್ಕಾಗಿ ಅಲೆಪ್ಪಿ ಬಳಿಯ ಕಲವೂರಿನಲ್ಲಿ ತೆಂಗಿನ ನಾರಿನ ಸಂಶೋಧನಾಲಯವನ್ನು ಸ್ಥಾಪಿಸಲಾಗಿದೆ.								(ಜಿ.ಜಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ